ಡೇರಿಯಸ್
	ಪ್ರಾಚೀನ ಪರ್ಷಿಯದ ಅಕಿಮೆನಿಡ್ ವಂಶದ ಮೂವರು ಅರಸರ ಹೆಸರು. 

	ಡೇರಿಯಸ್ I : 	ಆಳ್ವಿಕೆ ಕ್ರಿ. ಪೂ. 522-486.  ಪಾರ್ಥಿಯದ ಕ್ಷತ್ರಪನಾಗಿದ್ದ ಹಿಸ್ಟಾಸ್ಟಸನ ಮಗ.  ಆ ಮನೆತನದಲ್ಲಿ ಅತ್ಯಂತ ಖ್ಯಾತಿ ಪಡೆದ ಅರಸ.  ಈತನ ಬೆಹಿಸ್ತುನ್, ಪರ್ಸಿಪೊಲಿಸ್, ನಕ್ಷ್‍ಇರುಸ್ತುಮ್ ಶಾಸನಗಳಿಂದಲೂ ಗ್ರೀಕ್ ಇತಿಹಾಸಕಾರರಾದ ಹೆರಾಡೊಟಸ್ ಮತ್ತು ಟೀಸಿಯಸರ ಬರೆಹಗಳಿಂದಲೂ ಈತನ ಬಗ್ಗೆ ಅನೇಕ ವಿಷಯಗಳು ತಿಳಿದಿವೆ.  ಸೈರಸ್‍ನ ಬಳಿಕ ಪರ್ಷಿಯದಲ್ಲಿ ಆಳಿದ ಕ್ಯಾಂಬೈಸಿಸ್ ಈಜಿಪ್ಟನ್ನು ಮುತ್ತಿದ ಸಂದರ್ಭದಲ್ಲಿ ಆತನ ಬೆಂಗಾವಲು ಪಡೆಯಲ್ಲಿ ಡೇರಿಯಸ್ ಸೇರಿಕೊಂಡಿದ್ದು, ಕ್ರಿ. ಪೂ. 522ರಲ್ಲಿ ಆತ ಮರಣ ಹೊಂದಿದ ಬಳಿಕ ಕ್ಷಿಪ್ರಾಕ್ರಮಣದ ನೇತೃತ್ವ ವಹಿಸಿ ಸ್ವತಃ ಅರಸನಾದ.  ಆಗ ಸೈರಸನ ಮಗ ಬರ್ದಿಯ ಕೊಲೆಗೆ ಈಡಾದ.  ಕ್ಯಾಂಬೈಸಿಸನೇ ಕೊಲೆಗೆ ಕಾರಣನೆಂದೂ ಗೌಮಾತಾ ಎಂಬಾತ ತಾನೇ ಬರ್ದಿಯನೆಂದೂ ನಟಿಸಿ ರಾಜ್ಯವನ್ನು ಕಸಿಯಲು ಯತ್ನಿಸಿದಾಗ ಆಕಿಮೆನಿಡ್ ಸಂತತಿಯ ಉಳಿವಿಗಾಗಿ ತಾನು ಗೌಮಾತಾನನ್ನು ಕೊಂದುದಾಗಿಯೂ ಡೇರಿಯಸ್ ಬೆಹಿಸ್ತುನ್ ಶಾಸನದಲ್ಲಿ ಹೇಳಿಕೊಂಡಿದ್ದಾನೆ.   ಹೆರಾಡೊಟಸ್ ಮಾತ್ರ ಬರ್ದಿಯನ ಕೊಲೆಯ ಆಪಾದನೆಯನ್ನು ಡೇರಿಯಸನ ಮೇಲೆ ಹೊರಿಸಿದ್ದಾನೆ. 

	ಡೇರಿಯಸ್ ಅರಸನಾದಾಗ ರಾಜ್ಯದಲ್ಲಿ ದಂಗೆಗಳು ತಲೆದೋರಿದುವು.  ಸೂಸಿಯಾನ, ಬ್ಯಾಬಿಲೋನಿಯ, ಮಿಡಿಯ, ಸಗರ್ಟಿಯ, ಮಾರ್ಗಿಯಾನಗಳಲ್ಲಿ ಸ್ವತಂತ್ರ ಸರ್ಕಾರಗಳು ನೆಲೆಗೊಂಡುವು.  ಅಲ್ಲಿ ಗ್ರೀಸ್‍ನಿಂದ ಬಂದಿದ್ದ ಜನ ನೆಲೆಸಿದ್ದರು.  ಇವರು ಪರ್ಷಿಯನರ ಸಾರ್ವಭೌಮತ್ವವನ್ನು ಒಪ್ಪಿರಲಿಲ್ಲ.  ಗ್ರೀಸಿನ ಆತೆನ್ಸ್ ಗಣರಾಜ್ಯ ಸಹ ಈ ಸಣ್ಣ ರಾಜ್ಯಗಳ ಯತ್ನಕ್ಕೆ ಬೆಂಬಲ ನೀಡಿತು.  ಆದ್ದರಿಂದ ಈ ದಂಗೆಗಳನ್ನು ಅಡಗಿಸಲು ಡೇರಿಯಸ್ ತನ್ನೆಲ್ಲ ಬುದ್ಧಿಶಕ್ತಿ, ಸಾಮಥ್ರ್ಯಗಳನ್ನು ವ್ಯಯಿಸಬೇಕಾಯಿತು.  ಈ ದಂಗೆಗಳು ಸುಸಂಘಟಿವಾಗಿರದಿದ್ದುದು ಡೇರಿಯಸನ ಯಶಸಿಗೆ ಕಾರಣ.  ಆ ಸಂದರ್ಭದಲ್ಲಿ ನಡೆದ 19 ಕದನಗಳಲ್ಲಿ ಇವನು 9 ದಂಗೆಕೋರ ನಾಯಕರನ್ನು ಸೋಲಿಸಿದುದಾಗಿ ಬೆಹಿಸ್ತುನ್ ಶಾಸನದಲ್ಲಿ ಹೇಳಿದೆ.   ಕ್ರಿ. ಪೂ. 519ರ ಸುಮಾರಿಗೆ ಈತ ಪೂರ್ವ ಪ್ರಾಂತ್ಯಗಳನ್ನು ಸ್ವಾಧೀನಪಡಿಸಿಕೊಂಡು, ಮರುವರ್ಷ ಈಜಿಪ್ಟಿಗೆ ಹೋದ.  ಅಲ್ಲಿಯ ಕ್ಷತ್ರಪ ಆರ್ಯಂಡೆಸನನ್ನು ಕೊಂದು, ಗಾರ್ಡಿಸ್‍ನ ಕ್ಷತ್ರಪ ಓರೊಟಿಸ್ ಅವಿಧೇಯನಾಗಿದ್ದನೆಂದು ಅವನನ್ನು ಕೊಂದು ಹೊರದೂಡಿದ.  ಈ ಕ್ರಮಗಳಿಂದ ರಾಜ್ಯದಲ್ಲಿ ಭದ್ರತೆಯನ್ನು ಏರ್ಪಡಿಸಿದ ಅನಂತರ ಡೇರಿಯಸ್ ದಿಗ್ವಿಜಯ ಯಾತ್ರೆ ಕೈಗೊಂಡ. 

	ಐಯೋನಿಯ ದ್ವೀಪಗಳ ಗ್ರೀಕರು ಅರಿಸ್ಟಾಗೊರಸನ ನಾಯಕತ್ವದಲ್ಲಿ ದಂಗೆ ಎದ್ದರು. ಆತೆನ್ಸ್ ಅವರಿಗೆ ಸಹಾಯ ನೀಡಲು ಒಪ್ಪಿತು.  ಅತೇನಿಯನರು ಸಾರ್ಡಿಸ್ ನಗರವನ್ನು ಸುಟ್ಟರು.  ಆದರೂ ಪರ್ಷಿಯನರು ಗ್ರೀಕರನ್ನು ಹಿಂದಕ್ಕೆ ಓಡಿಸುವುದರಲ್ಲಿ ಯಶಸ್ವಿಯಾದರು.  ಅನಂತರ ಮಿಲೆಟಸ್ ಪಟ್ಟಣವನ್ನು ಮುತ್ತಿ, ಗ್ರೀಕರನ್ನು ಸೋಲಿಸಿ ಆ ನಗರವನ್ನು ನಾಶಗೊಳಿಸಿದರು. 

	ಡೇರಿಯಸನ ವಿರುದ್ಧ ಬಲಗಳಿಗೆ ಆತೆನ್ಸ್ ಪ್ರೋತ್ಸಾಹ ನೀಡಿತೆಂಬ ಕಾರಣದಿಂದ ಆ ದೇಶದ ಮೇಲೆ ಸೇಡು ತೀರಿಸಿಕೊಂಡು ಅವರು ತ್ರೇಸ್, ಮ್ಯಾಸಿ ಡೋನಿಯಗಳನ್ನು ವಶಪಡಿಸಿಕೊಂಡ.  ಮುಂದಿನ ಹೆಜ್ಜೆ ಗ್ರೀಸ್ ದೇಶದ ಆಕ್ರಮಣ.  ಅದಕ್ಕೆಂದೇ ಅಲ್ಲಿಯ ತೀರಪ್ರದೇಶಗಳ ಪರಿಚಯ ಪಡೆಯಲು ನೌಕಾಪಡೆಯೊಂದನ್ನು ಕಳುಹಿಸಿದ.  ಆದರೆ ಕ್ರಿ. ಪೂ. 499ರ ವರೆಗೂ ಅವನು ಸೈನಿಕ ಕಾರ್ಯಾಚರಣೆ ನಡೆಸಲಿಲ್ಲ.  ಅನಂತರ ತನ್ನ ಅಳಿಯ ಮಾರ್ಡೊನಿಯಸನ ನೇತೃತ್ವದಲ್ಲಿ ನೌಕಾದಳವೊಂದನ್ನು ಆತೆನ್ಸ್‍ನ ವಿರುದ್ಧ ಕಳುಹಿಸಿದ.  ಆದರೆ ದುರದೃಷ್ಟವಶಾತ್ ಅದು ಚಂಡಮಾರುತಕ್ಕೆ ಬಲಿಯಾಯಿತು.  ಕ್ರಿ. ಪೂ. 490 ರಲ್ಲಿ ಡೇಟಿಸನ ನೇತೃತ್ವದಲ್ಲಿ ಇನ್ನೊಂದು ಸೈನ್ಯವನ್ನು ಕಳುಹಿಸಲಾಯಿತು.  ಆತೆನ್ಸ್ ನಗರಕ್ಕೆ 20 ಮೈ. ದೂರದಲ್ಲಿದ್ದ ಮ್ಯಾರಥಾನ್ ಬಯಲಿನಲ್ಲಿ ನಡೆದ ಘೋರ ಕದನದಲ್ಲಿ ಪರ್ಷಿಯನರು ಸೋತರು.  ಆ ಬಳಿಕವೂ ಆತೆನ್ಸನ್ನು ವಶಪಡಿಸಿಕೊಳ್ಳಲು ಡೇರಿಯಸ್ ಸನ್ನಾಹ ನಡೆಸಿದನಾದರೂ ಆತನ ಬಯಕೆ ಈಡೇರಲಿಲ್ಲ.   ಡೇರಿಯಸ್ ಕ್ರಿ. ಪೂ. 486ರಲ್ಲಿ ತೀರಿಕೊಂಡ. 

	ಪರ್ಷಿಯ ಸಾಮ್ರಾಜ್ಯವನ್ನು ವಿಸ್ತರಿಸಿ ಅದರ ಬಲವನ್ನು ಹೆಚ್ಚಿಸಿದ್ದು ಡೇರಿಯಸನ ಒಂದು ಸಾಧನೆಯಾದರೂ, ಇತಿಹಾಸದಲ್ಲಿ ಇವನು ಅಮರನಾಗಿರುವುದು ತನ್ನ ರಾಜ್ಯದಲ್ಲಿ ಆಚರಣೆಗೆ ತಂದ ಆಡಳಿತ ಪದ್ಧತಿಗಳಿಗಾಗಿ.  ಬ್ಯಾಬಿಲೋನಿಯ ಮತ್ತು ಈಜಿಪ್ಟ್‍ಗಳ ಆಡಳಿತದ ಹೊಣೆಯನ್ನು ಅವನೇ ವಹಿಸಿಕೊಂಡು, ರಾಜ್ಯದ ಉಳಿದ ಭಾಗಗಳನ್ನು 20 ಪ್ರಾಂತ್ಯಗಳಾಗಿ ವಿಂಗಡಿಸಿ, ಒಂದೊಂದು ಪ್ರಾಂತ್ಯಕ್ಕೂ ಒಬ್ಬ ಕ್ಷತ್ರಪನನ್ನು ನೇಮಿಸಿದ.  ಈ ಕಾರ್ಯವನ್ನು ಹಿಂದೆ ಸೈರಸ್ ಆರಂಭಿಸಿದನಾದರೂ ಇದಕ್ಕೆ ಅಂತಿಮ ರೂಪ ದೊರೆತದ್ದು ಡೇರಿಯಸನ ಕಾಲದಲ್ಲಿ.  ಪೆಷಾವರ್ ಸುತ್ತಿಲಿನ ಅಂದಿನ ಗಾಂಧಾರ ಮತ್ತು ಉತ್ತರ ಪಂಜಾಬ್‍ಗಳನ್ನೊಳಗೊಂಡ ಸಿಂಧೂ ನದೀ ಪ್ರದೇಶದ ಹಿದು (ಹಿಂದೂ) ಎಂದು ಕರೆಯಲಾದ ಪ್ರಾಂತ್ಯವೂ ಈ ಆಡಳಿತ ವಿಭಾಗಗಳಲ್ಲಿ ಒಂದಾಗಿತ್ತೆಂದು ಇವನ ಪರ್ಸಿಪೊಲಿಸ್ ಮತ್ತು ನಕ್ಷ್ ಇಹಸುಮ್ ಶಾಸನಗಳಿಂದ ತಿಳಿದು ಬರುತ್ತದೆ.  ಈ ಪ್ರಾಂತ್ಯಗಳ ಅಧಿಕಾರಗಳ ಚಲನವಲನಗಳನ್ನು ಗಮನಿಸಿ ಅವರು ದಂಗೆ ಏಳದಂತೆ ಮಾಡಲು ಸಮರ್ಥ ಬೇಹುಗಾರ ಪಡೆಯನ್ನು ಅಸ್ತಿತ್ವಕ್ಕೆ ತಂದ. 

	ರಾಜ್ಯದ ಆರ್ಥಿಕಾಭಿವೃದ್ಧಿಗಾಗಿ ದೂರದೇಶಗಳೊಡನೆ ಈತ ವಾಣಿಜ್ಯ ಸಂಬಂಧಗಳನ್ನು ಬೆಳೆಸಲು ಯತ್ನಿಸಿದ.  ಅದಕ್ಕಾಗಿ ಪರಿವೀಕ್ಷಣಾ ಗುಂಪುಗಳನ್ನು ಕಳುಹಿಸಿದ.  ಈತನ ನೌಕಾಧಿಕಾರಿಗಳಲ್ಲೊಬ್ಬನಾಗಿದ್ದ ಕಾರಿಯಾಂಡದ ಸ್ಕೈಲಾಕ್ಸ್ ಎಂಬಾತ ಸಿಂಧೂ ನದೀ ಪ್ರಾಂತ್ಯಯದ ಪರಿಚಯ ಪಡೆಯಲು ಭಾರತಕ್ಕೆ ಬಂದಿದ್ದ.  ಈ ಪರಿವೀಕ್ಷಣೆಯ ಅನಂತರವೇ ಆ ಪ್ರಾಂತ್ಯವನ್ನು ಡೇರಿಯಸ್ ವಶಪಡಿಸಿಕೊಂಡಿದ್ದು.  ಈ ಪ್ರಾಂತ್ಯದಿಂದ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಚಿನ್ನದ ಪುಡಿ ಪರ್ಷಿಯದ ಬೊಕ್ಕಸವನ್ನು ತುಂಬುತ್ತಿತ್ತು.  ಒಳನಾಡಿನ ಸಂಚಾರ ವ್ಯವಸ್ಥೆಯನ್ನೂ ಇವನು ಅಭಿವೃದ್ಧಿಪಡಿಸಿದ.   ಹೊಸ ಹೊಸ ರಾಜಮಾರ್ಗಗಳು ನಿರ್ಮಾಣವಾದುವು.    ಕೆಂಪು ಸಮುದ್ರ ಮತ್ತು ನೈಲ್ ನದಿಯ ನಡುವಣ ಕಾಲುವೆ ಮರಳಿನಿಂದ ಮುಚ್ಚಿಹೋಗಿತ್ತು.   ಡೇರಿಯಸ್ ಅದನ್ನು ಸರಿಪಡಿಸಿ ಅದರ ಮೇಲೆ ನಾವೆಗಳು ಓಡಾಡುವಂತೆ ಮಾಡಿದ.  ನಾಣ್ಯ ವಿನಿಮಯದ ಸೌಲಭ್ಯವನ್ನು ಕಂಡುಕೊಂಡ.   ಡೇರಿಯಾಸ್ ತನ್ನ ರಾಜ್ಯಾದ್ಯಂತ ನಾಣ್ಯಗಳನ್ನು ಚಲಾವಣೆಗೆ ತಂದ.  ಸಮರ್ಪಕ ಅಂಚೆವ್ಯವಸ್ಥೆಯನ್ನು ಏರ್ಪಡಿಸಿದ.   ರಾಜ್ಯದಲ್ಲಿ ತೂಕ, ಅಳತೆಗಳಲ್ಲಿ ಏಕರೂಪತೆ ಸಾಧಿಸಿತು. 

	ಭಿನ್ನ ಜನಾಂಗಗಳಿಗೆ ಸೇರಿದ ಭಿನ್ನ ಧರ್ಮೀಯರನ್ನೊಳಗೊಂಡ ಸಾಮ್ರಾಜ್ಯದಲ್ಲಿ ಯಾರಿಗೂ ಅಸಮಾಧಾನವಾಗದಂತೆ ಎಲ್ಲ ಧರ್ಮಕ್ಕೂ ರಕ್ಷಣೆ, ಪ್ರೋತ್ಸಾಹಗಳನ್ನು ನೀಡಿದ್ದು ಡೇರಿಯಸ್‍ನ ಇನ್ನೊಂದು ಸಾಧನೆ.  ಖಾರ್ಗಾದಲ್ಲಿ ಈಜಿಪ್ಟ್ ದೇವತೆ ಅಮೊನ್‍ಗಾಗಿ ದೇವಾಲಯ ನಿರ್ಮಾಣವಾಯಿತು.  ಎಡ್‍ಫದಲ್ಲಿಯ ದೇವಾಲಯದ ಜೀರ್ಣೋದ್ಧಾರವಾಯಿತು.  ಈಜಿಪ್ಟ್‍ನ ಪುರೋಹಿತರ ಸಲಹೆ ಪಡೆದು ಡೇರಿಯಸ್ ಸೂಕ್ತವಾದ ಕಾನೂನುಗಳನ್ನು ರಚಿಸಿದ.  ಜಿರೂಸಲೆಮ್ ನಗರದಲ್ಲಿ ಯೆಹೂದ್ಯರು ತಮ್ಮ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಕೊಳ್ಳಲು ಅನುಮತಿ ಇತ್ತ.  ಡೇರಿಯಸ್ ವೈಯಕ್ತಿಕವಾಗಿ ಜರತುಷ್ಟ್ರ ಧರ್ಮವನ್ನು ಅವಲಂಬಿಸಿದ್ದ.  ಪರ್ಷಿಯದಲ್ಲಿ ಅದು ರಾಜಧರ್ಮವೆಂದು ಸ್ವೀಕೃತವಾಗಲು ಡೇರಿಯಸನೇ ಕಾರಣವೆಂದು ಹೇಳಲಾಗಿದೆ.   

	ಕ್ರಿ. ಪೂ. 521ರಲ್ಲಿ ಸೂಸ ಈತನ ರಾಜಧಾನಿಯಾಯಿತು. ಡೇರಿಯಸ್ ಅಲ್ಲಿಯ ಕೋಟೆ ಕೊತ್ತಲುಗಳನ್ನು ಬಲಪಡಿಸಿ ಅರಮನೆಯೊಂದನ್ನು ಕಟ್ಟಿಸಿದ.  ಅದಕ್ಕೆಂದೇ ರಾಜ್ಯದ ಎಲ್ಲ ಮೂಲೆಗಳಿಂದಲೂ ಪರಿಣತರಾದ ಶಿಲ್ಪಿಗಳನ್ನೂ ತಂತ್ರಜ್ಞರನ್ನೂ ಬರಮಾಡಿಕೊಂಡಿದ್ದ.  ಡೇರಿಯಸನ ಊರಾದ ಪರ್ಸಿಪೊಲಿಸ್‍ನಲ್ಲೂ ಒಂದು ಅರಮನೆಯ ನಿರ್ಮಾಣವಾಯಿತು. 

	ಡೇರಿಯಸ್ II : ಆಳ್ವಿಕೆ ಕ್ರಿ. ಪೂ. 423-404. 1ನೆಯ ಆರ್ಟಗ್ಸಕ್ರ್ಸೀಸûನ ಮಗ.  ಬ್ಯಾಬಿಲೋನಿಯನ್ ಉಪಪತ್ನಿಯಲ್ಲಿ ಜನಿಸಿದ.  ಓಕಸ್ ಎಂಬುದು ಇವನ ಮೊದಲ ಹೆಸರು.  ಸಿಂಹಾಸನವನ್ನೇರಿದ ಅನಂತರ ಡೇರಿಯಸ್ ಎಂಬ ಹೆಸರು ತೆಳದ.  ಈತ ತನ್ನ ಮಲಸೋದರನಾದ ಸಾಗ್ಡಿಯೇನಸನಿಂದ ರಾಜ್ಯವನ್ನು ಕಸಿದುಕೊಂಡ.  ಈತನ ಕಾಲದಲ್ಲಿ ರಾಜ್ಯದಲ್ಲಿ ಅಶಾಂತಿ ತಲೆದೋರಿತು.   ಪತ್ನಿ ಮತ್ತು ಮಲಸೋದರಿಯರ ಪ್ರಭಾವಕ್ಕೊಳಗಾಗಿ ಸ್ವಬುದ್ಧಿಯನ್ನು ಕಳೆದುಕೊಂಡು ಪ್ರಜೆಗಳ ದ್ವೇಷಕ್ಕೆ ಪಾತ್ರನಾದ. 

ಡೇರಿಯಸ್ III : ಆಳ್ವಿಕೆ ಕ್ರಿ. ಪೂ. 336/335-330.  ಆಕಿಮೆನಿಡ್ ಸಂತತಿಯ ಕೊನೆಯ ಅರಸ.  2ನೆಯ ಆರ್ಟಗ್ಸಕ್ರ್ಸೀಸನ ಸೋದರರಲ್ಲೊಬ್ಬನಾದ ಅಸ್ಟಾನೀಸನ ಮಗ.   3ನೆಯ ಆರ್ಟಗ್ಸಕ್ರ್ಸೀಸನನ್ನು ಬಾಗೋಸ್ ಎಂಬ ನಪುಂಸಕ ಅಧಿಕಾರಿ ಕೊಲೆಮಾಡಿ ಈತನನ್ನು ಸಿಂಹಾಸನದ ಮೇಲೆ ಕೂರಿಸಿದ.  ಡೇರಿಯಸ್ ಅಧಿಕಾರ ಸೂತ್ರ ವಹಿಸಿಕೊಂಡ ಮೇಲೆ ಬಾಗೋಸನಿಗೆ ವಿಷ ಊಡಿಸಿದ, ಆ ವೇಳೆಗೆ ಮ್ಯಾಸಿಡೋನಿಯದಲ್ಲಿ ಅಲೆಕ್ಸಾಂಡರ್ ಪ್ರಬಲವಾಗಿ ತನ್ನ 

ದಂಡಯಾತ್ರೆಯನ್ನಾರಂಭಿಸಿದ್ದ.  ಉತ್ತರ ಸಿರಿಯದ ಇಸನ್ ಕೊಲ್ಲಿಯಲ್ಲಿ ಡೇರಿಯಸನ ಸೈನ್ಯ ಅಲೆಕ್ಸಾಂಡರನನ್ನು ಎದುರಿಸಿತು.  ಕ್ರಿ. ಪೂ. 333ರಲ್ಲಿ ನಡೆದ ಕದನದಲ್ಲಿ ಡೇರಿಯಸ್ ಸೋತು ತನ್ನ ತಾಯಿ ಹೆಂಡತಿ ಮಕ್ಕಳನ್ನು ಬಿಟ್ಟು ಓಡಿದ.  ಅವರನ್ನು ಹಿಂದಕ್ಕೆ ಒಪ್ಪಿಸಬೇಕೆಂಬ ಡೇರಿಯಸನ ಬೇಡಿಕೆಯನ್ನು ಅಲೆಕ್ಸಾಂಡರ್ ಒಪ್ಪಲಿಲ್ಲ.  ಯುಫ್ರೇಟಿಸ್ ನದಿಯ ಪಶ್ಚಿಮದ ಭಾಗವನ್ನು ಒಪ್ಪಿಸುವುದಾಗಿ ಡೇರಿಯಸ್ ಹೇಳಿದಾಗಲೂ ಅಲೆಕ್ಸಾಂಡರ್ ಸಮ್ಮತಿಸಲಿಲ್ಲ.  ಡೇರಿಯಸ್ ತನ್ನನ್ನು ಚಕ್ರವರ್ತಿಯೆಂದು ಒಪ್ಪಿಕೊಳ್ಳಬೇಕೆಂಬುದು ಅಲೆಕ್ಸಾಂಡರನ ಷರತ್ತಾಗಿತ್ತು.  ಕೊನೆಗೆ ಅಲೆಕ್ಸಾಂಡರ್ ಸೇನೆ ಮೆಸೊಪೊಟೇಮಿಯವನ್ನು ಪ್ರವೇಶಿಸಿತು.   ಕ್ರಿ. ಪೂ. 331ರ ಅಕ್ಟೋಬರ್ 1ರಂದು ಇಸನ್ ಎಂಬಲ್ಲಿ ಡೇರಿಯಸ್ ಸಂಪೂರ್ಣವಾಗಿ ಸೋತು ಬ್ಯಾಕ್ಟ್ರಿಯದ ಕಡೆಗೆ ಓಡಿಹೋದ.  ಅಲ್ಲಿಯ ಕ್ಷತ್ರಪನಾಗಿದ್ದ ಬೆಸಸ್ ಎಂಬವನಿಂದ ಕ್ರಿ. ಪೂ.330ರ ಜುಲೈಯಲ್ಲಿ ಡೇರಿಯಸ್ ಕೊಲೆಯಾದ. 

	ಪರ್ಷಿಯನ್ ಮೂಲದ ಇತರ ಹಲವು ಅರಸರು ಡೇರಿಯಸ್ ಎಂಬ ಹೆಸರು ತಳೆದಿದ್ದರು :  ಪರ್ಸಿಸಿನ ದೊರೆಗಳು ; ಪಾಂಪೇಯಿಂದ ಪರಾಜಯಗೊಂಡ, ಮಿಡಿಯದ ದೊರೆ ; ಕ್ರಿ. ಪೂ. 40 ರಲ್ಲಿ ಮಾರ್ಕ್ ಆಂಟೊನಿಯಿಂದ ಪಾಂಟಸ್‍ನ ದೊರೆಯಾಗಿ ನೇಮಕ ಹೊಂದಿದ್ದವನು-ಇವರು ಇಂಥವರಲ್ಲಿ ಕೆಲವರು.
(ಜೆ.ಬಿ.ಆರ್.)